ಬ್ರೌನ್, ಕಾರ್ಲ್ ಫರ್ಡಿನಾಂಡ್
	1850-1918. ಜರ್ಮನಿಯ ಭೌತವಿಜ್ಞಾನಿ. ಜನನ 6-6-1850 ಮರಣ (ಅಮೆರಿಕ) 20-4-1918. ಜರ್ಮನಿಯ ಪುಲ್ಡ ಎಂಬಲ್ಲಿ ಜನಿಸಿ ಗ್ಯುಮ್ಯೆಷೂಮ್ ಶಾಲೆಯಲ್ಲಿ ಶಿಕ್ಷಣ ಪಡೆದು ಮಾರ್‍ಬರ್ಗ್ ಮತ್ತು ಬರ್ಲಿನ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮುಂದುವರಿಸಿ 1872ರಲ್ಲಿ ಪದವೀಧರನಾದ. ಪುಟಿತ ದಾರಗಳ ಆಂದೋಲನಗಳ ಬಗ್ಗೆ ಪ್ರಬಂಧ ಬರೆದು ವಿಶ್ವವಿದ್ಯಾಲಯಕ್ಕೆ ಒಪ್ಪಿಸಿದ. ಅಲ್ಲಿಂದ ಮುಂದೆ ವುರ್ಸ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ ವಿಜ್ಞಾನಿ ಕ್ವಿಂಕೆಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. 1874-85 ಅವಧಿಯಲ್ಲಿ ಈತ ಜರ್ಮನಿಯ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕೆಲಸಮಾಡಿ 1880ರಲ್ಲಿ ಟ್ಯುಬಿನ್‍ಗೆನ್ ವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನ ಪ್ರಾಧ್ಯಾಪಕನಾಗಿ ಸೇರಿದ. ಹತ್ತು ವರ್ಷಗಳ ಬಳಿಕ 1895ರಲ್ಲಿ ಸ್ಟ್ರಾಸ್‍ಬರ್ಗಿನ ಭೌತವಿಜ್ಞಾನ ಸಂಸ್ಥೆಯ ಪ್ರಾಂಶುಪಾಲನಾಗಿ ಹಿಂತಿರುಗಿ ಕೊನೆಯತನಕ ಅಲ್ಲೇ ಸೇವೆ ಸಲ್ಲಿಸಿದ.

	ಬ್ರೌನ್ ನಡೆಸಿದ ಪ್ರಥಮ ಸಂಶೋಧನೆಗಳು ಪುಟಿತ ಸಲಾಕಿಗಳ ಮತ್ತು ದಾರಗಳ ಆಂದೋಲನಗಳನ್ನು ಕುರಿತಂತೆ ಇದ್ದುವು. ಇವು ಸಲಾಕಿಗಳು ಅನುಭವಿಸುವ ವ್ಯಾಕೋಚನಗಳು ಮತ್ತು ಅವುಗಳ ಪರಿಸರಗಳು ಆಂದೋಲನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂದು ತಿಳಿಸುವಂಥ ಪ್ರಯೋಗಗಳಾಗಿದ್ದುವು. ಘನ ಪದಾರ್ಥಗಳ ಲೀನತೆಯ (ಸಾಲ್ಯುಬಿಲಿಟಿ) ಮೇಲೆ ಒತ್ತಡ ಬೀರುವ ಪ್ರಭಾವ ಮತ್ತು ಅವನ್ನು ಒಳಗೊಂಡಂತೆ ಉಷ್ಣಗತಿವಿಜ್ಞಾನದ ಅಧ್ಯಯನ-ಇವೇ ಮೊದಲಾದವು ಈತ ಮಾಡುತ್ತಿದ್ದ ಇತರ ವ್ಯಾಸಂಗ ವಿಷಯಗಳು.

	ಬ್ರೌನನ ಅತ್ಯಂತ ಪ್ರಮುಖ ಕಾರ್ಯ ವಿದ್ಯುತ್‍ಕ್ಷೇತ್ರದಲ್ಲಿಯ ಪ್ರಯೋಗಗಳು ಓಮ್‍ನ  ನಿಯಮದಿಂದಾಗುವ ವಿಚಲನೆಗಳೇನು, ಹಾಗೆಯೇ ಉಷ್ಣಾಕರಗಳಿಂದ ಪ್ರವಾಹ ವಿದ್ಯುತ್ ಧಾತುಗಳನ್ನು ವಿಪರ್ಯಯಗೊಳಿಸಿದಾಗ ಉಂಟಾಗುವ ವಿದ್ಯುಚ್ಛಾಲಕ ಬಲ ಹೇಗೆ ಬದಲಾಗುತ್ತದೆ, ಇವನ್ನೆಲ್ಲ ಈತ ತಿಳಿದು ಒಂದು ಪ್ರಬಂಧ ಪ್ರಕಟಿಸಿದ. ಪ್ರಯೋಗಗಳಿಂದ ಬ್ರೌನ್ ವಿದ್ಯುನ್ಮಾಪಕ ಎಂಬ ಹೆಸರಿನ ಉಪಕರಣ ಉಪಜ್ಞಿಸುವುದು ಸಾಧ್ಯವಾಯಿತು. ಹಾಗೆಯೇ 1897ರಲ್ಲಿ ಈತ ಮಾಡಿದ ಪ್ರಯೋಗಗಳು ಕ್ಯಾಥೋಡ್ ಕಿರಣ ಆಂದೋಲನ ಲೇಖಕದ ಉಪಜ್ಞೆಗೆ ಕಾರಣವಾದವು.

	1898ರಲ್ಲಿ ಈತ ನಿಸ್ತಂತು ದೂರಲೇಖಕದ ಬಗ್ಗೆ ಪ್ರಯೋಗಮಾಡಲು ಪ್ರಾರಂಭಿಸಿದ. ಆಗ ನೀರಿನ ಮೂಲಕ ಉಚ್ಚ ಆವರ್ತಾಂಕವುಳ್ಳ ಮೋರ್ಸ್ ಸಂಜ್ಞೆಗಳನ್ನು ಕಳುಹಿಸಲು ಪ್ರಯತ್ನಿಸಿದ. ತರುವಾಯ ನಿಸ್ತಂತು ದೂರ ಲೇಖಕಕ್ಕೆ ಉಪಯೋಗವಾಗುವ ವಿದ್ಯುನ್ಮಂಡಲವನ್ನು ವಿಜ್ಞಾನಿಗಳಿಗೆ ಪರಿಚಯ ಮಾಡಿಕೊಟ್ಟ. ಹೀಗೆ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ವಿದ್ಯುದಲೆಗಳನ್ನು ಪ್ರೇಷಿಸುವುದರಲ್ಲಿ ಈತ ಮೊದಲಿಗನಾದ. ಓರೆಗೊಂಡ ದಂಡ ವಾರ್ತಾಗ್ರಾಹಗಳನ್ನು ಉಪಯೋಗಿಸಿ ನಿರ್ದಿಷ್ಟ ನೇರಗಳಲ್ಲಿ ಪ್ರಸಾರಮಾಡಿದ ಸಂದೇಶಗಳನ್ನು ಹಿಡಿದಿಡುವುದರಲ್ಲಿ ಯಶಸ್ವಿಯಾದ (1902).

	ಒಂದನೆಯ ಮಹಾಯುದ್ಧ ಪ್ರಾರಂಭವಾದ ಮೇಲೆ ಏಕಸ್ವಾಮ್ಯವೊಂದರ ಹಕ್ಕಿನ ಬಗ್ಗೆ ನಡೆದ ಮೊಕದ್ದಮೆಯಲ್ಲಿ ಸಾಕ್ಷಿ ಹೇಳಲು ಈತ ನ್ಯೂಯಾರ್ಕಿಗೆ ಹೋದ. ಪ್ರಯೋಗಶಾಲೆಯಲ್ಲಿ ಇರಲಾಗದಿದ್ದುದರಿಂದಲೂ ಅನಾರೋಗ್ಯ ಕಾರಣದಿಂದಲೂ ತಾನು ಮಾಡಬೇಕೆಂದಿದ್ದ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ಮುಂದುವರಿಸಲಾಗಲಿಲ್ಲ. ಹೀಗಾಗಿ ಕೊನೆಯ ದಿವಸಗಳನ್ನು ಅಮೆರಿಕದಲ್ಲಿಯೇ ಕಳೆದು ನ್ಯೂಯಾರ್ಕಿನಲ್ಲಿ ಅಸುನೀಗಿದ, ಈತನಿಗೆ ಮಾರ್ಕೊನಿ ಜೊತೆ 1909ರಲ್ಲಿ ನೊಬೆಲ್ ಪಾರಿತೋಷಿಕ ನೀಡಿ ಗೌರವಿಸಲಾಯಿತು. (ಸಿ.ಕೆ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ